ಖದೀಜಾ-
ಪೈಗಂಬರ್ ಮಹಮ್ಮದರ ಮೊದಲನೆಯ ಹೆಂಡತಿ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ಮಹಮ್ಮದರ ಕೈ ಹಿಡಿಯುವ ಮೊದಲು ಈಕೆಗೆ ಎರಡು ಸಲ ವಿವಾಹವಾಗಿತ್ತಲ್ಲದೆ ಮೂರು ಮಕ್ಕಳಿದ್ದವು. ತಮ್ಮ ದೊಡ್ಡಪ್ಪನ ಶಿಫಾರಸಿನ ಮೇರೆಗೆ ಮಹಮ್ಮದ್ ಪೈಗಂಬರ್ ತಮ್ಮ ತಾರುಣ್ಯದಲ್ಲಿ ಖದೀಜೆಯ ಬಳಿ ನೌಕರಿಗೆ ಸೇರಿ ಬಸ್ರಾ, ದಮಾಸ್ಕಸ್, ಅಲೆಪ್ಪೊ ನಗರಗಳಿಗೆ ವ್ಯಾಪಾರನಿಮಿತ್ತವಾಗಿ ಹೋಗಿಬರುತ್ತಿದ್ದ ಸಮಯದಲ್ಲಿ ಖದೀಚೆಗೆ ಅವರಲ್ಲಿ ಪ್ರೀತಿವಿಶ್ವಾಸಗಳು ಅಂಕುರಿಸಿದುವಾಗಿ ಅವರನ್ನೇ ಲಗ್ನವಾದಳು. ಮದುವೆಯಾದಾಗ ಪೈಗಂಬರರಿಗೆ 25 ವರ್ಷ ವಯಸ್ಸಾದರೆ ಖದೀಜೆಗೆ 40 ವರ್ಷ ವಯಸ್ಸಾಗಿತ್ತು. ಅನಂತರ 25 ವರ್ಷಗಳ ಪರ್ಯಂತ ಈಕೆ ಮಹಮ್ಮದನಿಗೆ ಸಲಹೆಗಾರಳೂ ಆಧಾರಳೂ ಆಗಿದ್ದಳು. ಮಹಮ್ಮದನಿಂದ ಈಕೆಗೆ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು ಹುಟ್ಟಿದರು. ಹೆಣ್ಣು ಮಕ್ಕಳಲ್ಲಿ ಫಾತಿಮಾ ಎನ್ನುವವಳನ್ನು ಸಯ್ಯದ್ ಎಂಬ ಮನೆತನದ ಹಜರತ್ ಅಲಿ ಎಂಬುವವರಿಗೆ ಲಗ್ನಮಾಡಿಕೊಟ್ಟರು. ಖುತ್‍ಬಾ (ಧಾರ್ಮಿಕ ಆದೇಶ) ಓದುವುದು ಸಯ್ಯದ್ ಮನೆತನದ ಗೌರವಗಳಲ್ಲೊಂದು. ಖದೀಜಾಳೇ ಮಹಮ್ಮದ್ ಪೈಗಂಬರರ ಹೊಸ ಧರ್ಮದ ಮೊದಲನೆಯ ಅನುಯಾಯಿ. ಈಕೆ ಇರುವವರೆಗೂ ಪೈಗಂಬರರು ಬೇರೆ ಮದುವೆಯಾಗಲಿಲ್ಲ. ಅನಂತರ ಅನೇಕ ಬಾರಿ ಲಗ್ನವಾದರಾದರೂ ಖದೀಜಾ ಮರಣಹೊಂದಿದ ಎಷ್ಟೋ ದಿನದ ವರೆಗೆ ಆಕೆಯ ನೆನಪು ಅವರ ಮನಸ್ಸಿನಿಂದ ಮಾಸಿಹೋಗಲಿಲ್ಲವೆನ್ನಲಾಗಿದೆ.

	ಕ್ರಿ.ಶ. 619ರ ಆಗಸ್ಟ್ ತಿಂಗಳಲ್ಲಿ-ಅಂದರೆ ಹಿಜರಿ ಶಕೆ ಪ್ರಾರಂಭವಾಗುವ ಮೂರು ವರ್ಷ ಮುಂಚೆ-ಖದೀಜಾ ಮಕ್ಕಾದಲ್ಲಿ ಮರಣ ಹೊಂದಿದಳು. ಈಕೆಯ ಗೋರಿ ಈಗಲೂ ಮಕ್ಕಾದಲ್ಲಿದೆ. ಅದರ ಮೇಲೆ ಕ್ಯೂಫಿಕ್ ಲಿಪಿಯಲ್ಲಿ ಸುರತ್ ಅಲ್-ಕರಮೀ ಎನ್ನುವ ಕುರಾನಿನ ಭಾಗವನ್ನು ಕೆತ್ತಲಾಗಿದೆ.

	ಖದೀಜಾ ತನ್ನ ಗಂಡನನ್ನು ದೇವರ ಪ್ರೇಷಿತ ಪ್ರತಿನಿಧಿ ಎಂದು ನಂಬಿದ್ದಳಲ್ಲದೆ ಮಹಮ್ಮದ್ ಪೈಗಂಬರರ ಉಪದೇಶಗಳಲ್ಲಿ ವಿಶ್ವಾಸವಿಟ್ಟು ಅವರ ಸಂಚಾರ ಕಾಲದಲ್ಲಿ ಆ ಉಪದೇಶಗಳ ಸಮರ್ಥನೆ ಮಾಡುತ್ತಿದ್ದಳು. 	 		 *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ